Viewing:

ಯೆಹೆ Ezekiel 13

Select a Chapter

ಸುಳ್ಳು ಪ್ರವಾದಿಗಳನ್ನು ಖಂಡಿಸಿದ್ದು

1ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2“ನರಪುತ್ರನೇ, ಪ್ರವಾದನೆ ಮಾಡಿ, ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತಾ ಹೀಗೆ ಹೇಳು, ‘ಯೆಹೋವನ ವಾಕ್ಯವನ್ನು ಕೇಳಿರಿ. 3ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯನ್ನು ಏನೆಂದು ಹೇಳಲಿ! 4ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳ ಹಾಗೆ ಇದ್ದಾರೆ. 5ಯೆಹೋವನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿ ಗೋಡೆಯ ಒಡಕುಗಳನ್ನೇರಲಿಲ್ಲ, ಇಸ್ರಾಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಭದ್ರ ಮಾಡಲೂ ಇಲ್ಲ. ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ, 6ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ. 7ನಾನು ಮಾತನಾಡದೆ ಹೋದರೂ, ‘ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.

8“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವು ವ್ಯರ್ಥವಾದದ್ದನ್ನು ನುಡಿದು, ಸುಳ್ಳಾದ ದರ್ಶನವನ್ನು ಕಂಡಿದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ’ ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ. 9‘ಮಿಥ್ಯ ದರ್ಶನಹೊಂದಿ, ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರೀಸಭೆಯಲ್ಲಿ ಸೇರಬಾರದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗಬಾರದು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.

10“ಅಶಾಂತಿಯಿದ್ದರೂ ಅವರು ‘ಶಾಂತಿಯಿದೆ’ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರೆ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೂ, ಇಗೋ, ಅದಕ್ಕೆ ಸುಣ್ಣಬಳಿಯುತ್ತಾರೆ; 11ಆದಕಾರಣ, ನೀನು ಸುಣ್ಣಬಳಿಯುವವರಿಗೆ ಹೀಗೆ ನುಡಿ, ‘ವಿಪರೀತ ಮಳೆಯಾಗಿ ಗೋಡೆಯು ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವವು; ಬಿರುಗಾಳಿಯು ಗೋಡೆಯನ್ನು ಒಡೆದುಹಾಕುವುದು.’ 12ಇಗೋ, ಗೋಡೆಯು ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?”

13ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶ ಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು, ನನ್ನ ರೋಷದಿಂದ ಆನೆಕಲ್ಲುಗಳು ಸುರಿಯುವವು; 14ನೀವು ಸುಣ್ಣಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲ ಸಮಮಾಡಿ ಅದರ ಅಸ್ತಿವಾರವನ್ನು ಬಯಲುಪಡಿಸುವೆನು; ಅದು ಬಿದ್ದುಹೋಗುವುದು ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು. 15ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು, 16‘ಇಸ್ರಾಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯಿದೆ ಎಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇಮಿನ ವಿಷಯವಾಗಿ ಪ್ರವಾದಿಸಿದ್ದೀರಲ್ಲವೆ? ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು’” ಇದು ಕರ್ತನಾದ ಯೆಹೋವನ ನುಡಿ.

ಸುಳ್ಳು ಪ್ರವಾದಿನಿಯರನ್ನು ಖಂಡಿಸಿದ್ದು

17“‘ನರಪುತ್ರನೇ, ಸ್ವಕಲ್ಪಿತವಾದುದನ್ನು ಕಣಿ ಎಂದು ಹೇಳುವ ನಿನ್ನ ಸ್ವಕುಲ ಸ್ತ್ರೀಯರ ಕಡೆಗೆ ಮುಖ ಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು.’ 18ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಗಳನ್ನು ಕಟ್ಟಿ, ಉದ್ದವಾದವರಿಗೂ, ಗಿಡ್ಡವಾದವರಿಗೂ ತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಸ್ತ್ರೀಯರ ಗತಿಯನ್ನು ಏನೆಂದು ಹೇಳಲಿ! ಸ್ತ್ರೀಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ ಸ್ವಂತ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ? 19ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’

20“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತು ಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಿಗಳನ್ನು ನಾನು ಬಿಡಿಸಿ, ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು. 21ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು. 22ನಾನು ಎದೆಗುಂದಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ, ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ. 23ಆದಕಾರಣ ನೀವು ಮಿಥ್ಯ ದರ್ಶನವನ್ನು ಹೊಂದಿ, ಕಣಿಹೇಳುವ ಕೆಲಸವು ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು, ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.”