Viewing:

ಯೋಹಾ John 21

Select a Chapter

ಯೇಸು ತನ್ನ ಶಿಷ್ಯರಿಗೆ ಪುನಃ ದರ್ಶನಕೊಟ್ಟದ್ದು

1ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ಪುನಃ ಕಾಣಿಸಿಕೊಂಡನು: 2ಸೀಮೋನ್ ಪೇತ್ರನೂ, ದಿದುಮನೆಂಬ ತೋಮನೂ, ಗಲಿಲಾಯದ ಕಾನಾ ಊರಿನ ನತಾನಯೇಲನೂ, ಜೆಬೆದಾಯನ ಮಕ್ಕಳೂ ಮತ್ತು ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿಬಂದಿದ್ದರು. 3ಆಗ ಅವರಿಗೆ ಸೀಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದು ಹೇಳಲು ಅವರು ಅವನಿಗೆ, “ನಾವೂ ಸಹ ನಿನ್ನ ಜೊತೆಯಲ್ಲಿ ಬರುತ್ತೇವೆ” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ. 4ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ. 5ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು. 6ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. 7ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. 8ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. 9ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು. 10ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು, 11ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ. 12ಯೇಸು ಅವರಿಗೆ, “ಬಂದು ಊಟ ಮಾಡಿರಿ” ಎಂದು ಹೇಳಿದನು. ಶಿಷ್ಯರು ಆತನನ್ನು ಕರ್ತನೆಂದು ತಿಳಿದಿದ್ದರಿಂದ “ನೀನು ಯಾರು?” ಎಂದು ಕೇಳುವುದಕ್ಕೆ ಅವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. 13ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು. ಹಾಗೆಯೇ ಮೀನನ್ನೂ ಕೊಟ್ಟನು.

14ಯೇಸು ಸತ್ತವರೊಳಗಿಂದ ಜೀವಿತನಾಗಿ ಎದ್ದ ಮೇಲೆ, ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. 15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು.

24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.