Viewing:

ಜ್ಞಾನೋ Proverbs 18

Select a Chapter

1ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ,

ಸಮಸ್ತ ಸುಜ್ಞಾನಕ್ಕೂ ರೇಗುವನು.

2ಮೂಢನಿಗೆ ವಿವೇಕವು ಅನಿಷ್ಟ;

ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ.

3ದುರಾಚಾರವಿದ್ದಲ್ಲಿ ತಾತ್ಸಾರ;

ಅವಮಾನವಿದ್ದಲ್ಲಿ ಧಿಕ್ಕಾರ.

4ಸತ್ಪುರುಷನ ನುಡಿಯು ಆಳವಾದ ನೀರು,

ಜ್ಞಾನದ ಬುಗ್ಗೆ, ಹರಿಯುವ ತೊರೆ.

5ದುಷ್ಟನಿಗೆ ಪ್ರಸನ್ನನಾಗಿ

ಶಿಷ್ಟನಿಗೆ ನ್ಯಾಯತಪ್ಪಿಸುವುದು ಅಧರ್ಮ.

6ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ,

ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ.

7ಜ್ಞಾನಹೀನನಿಗೆ ಬಾಯಿ ನಾಶ,

ತುಟಿಗಳು ಪಾಶ.

8ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳು,

ಹೊಟ್ಟೆಯೊಳಕ್ಕೇ ಇಳಿಯುವವು.

9ಕೆಲಸಗಳ್ಳನು ಕೆಡುಕನಿಗೆ ತಮ್ಮ.

10ಯೆಹೋವನ ನಾಮವು ಬಲವಾದ ಬುರುಜು,

ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.

11ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದು,

ಎತ್ತರವಾದ ಗೋಡೆಯೆಂದು ಭಾವಿಸಿಕೊಳ್ಳುತ್ತಾನೆ.

12ಭಂಗಕ್ಕೆ ಮೊದಲು ಗರ್ವದ ಹೃದಯ,

ಮಾನಕ್ಕೆ ಮುಂಚೆ ದೀನತೆ.

13ಗಮನಿಸದೆ ಉತ್ತರಕೊಡುವವನು,

ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.

14ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು,

ಆತ್ಮವೇ ನೊಂದರೆ ಸಹಿಸುವವರು ಯಾರು?

15ವಿವೇಕಿಯ ಹೃದಯವು ತಿಳಿವಳಿಕೆಯನ್ನು ಸಂಪಾದಿಸುವುದು,

ಜ್ಞಾನಿಯ ಕಿವಿಯು ತಿಳಿವಳಿಕೆಯನ್ನು ಹುಡುಕುವುದು.

16ಕಾಣಿಕೆಯು ಅನುಕೂಲತೆಗೂ,

ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ.

17ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು,

ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವುದು.

18ಚೀಟು ಹಾಕುವುದರಿಂದ ವ್ಯಾಜ್ಯಶಮನವೂ,

ಬಲಿಷ್ಠರ ನ್ಯಾಯಾನ್ಯಾಯಗಳ ವಿವೇಚನೆಯೂ ಆಗುವುದು.

19ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ

ಅನ್ಯಾಯಹೊಂದಿದ ಸಹೋದರನನ್ನು ಗೆಲ್ಲುವುದು ಅಸಾಧ್ಯ,

ಕೋಟೆಯ ಅಗುಳಿಗಳಂತೆ ಜಗಳಗಳು ಜನರನ್ನು ಅಗಲಿಸುತ್ತವೆ.

20ಮನುಷ್ಯನು ತನ್ನ ಬಾಯಿಯ ಬೆಳೆಯನ್ನು ಹೊಟ್ಟೆ ತುಂಬಾ ಉಣ್ಣುವನು,

ತನ್ನ ತುಟಿಗಳ ಫಲವನ್ನು ಸಾಕಷ್ಟು ತಿನ್ನುವನು.

21ಜೀವ ಮತ್ತು ಮರಣಗಳು ನಾಲಿಗೆಯ ವಶ,

ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,

22ಪತ್ನಿಲಾಭವು ರತ್ನಲಾಭ,

ಅದು ಯೆಹೋವನ ಅನುಗ್ರಹವೇ.

23ಬಡವನು ಬಿನ್ನೈಸುವನು,

ಬಲ್ಲಿದನು ಉತ್ತರವನ್ನು ಉಗ್ರವಾಗಿ ಕೊಡುವನು.

24ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ,

ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.